ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಶಿಕ್ಷಣ ಇತಿಹಾಸದಲ್ಲೇ ಮೊದಲ ಬಾರಿಗೆ ಶೇ.94.10 ರಷ್ಟು ದಾಖಲೆ ಮಟ್ಟದ ಉತ್ತೀರ್ಣ ಪ್ರಮಾಣ ದಾಖಲಾಗಿದೆ. ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದ್ದು, SMS ಮತ್ತು ವಾಟ್ಸಪ್ ಮುಖಾಂತರವೂ ವಿದ್ಯಾರ್ಥಿಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಈ ಬಾರಿ ಪರೀಕ್ಷೆಗೆ ಹಾಜರಾದ 7,75,999 ವಿದ್ಯಾರ್ಥಿಗಳ ಪೈಕಿ 7,24,794 ಮಂದಿ ಪಾಸ್ ಆಗಿದ್ದು, ಇದು ವ್ಯವಸ್ಥಿತ ಮೌಲ್ಯಮಾಪನ ಹಾಗೂ ವಿದ್ಯಾರ್ಥಿಗಳ ಶ್ರಮಕ್ಕೆ ಸಾಕ್ಷಿಯಾಗಿದೆ. ವಿಶೇಷವಾಗಿ 96.18% ಫಲಿತಾಂಶದೊಂದಿಗೆ 3,77,922 ಬಾಲಕಿಯರು ಮೇಲುಗೈ ಸಾಧಿಸಿದ್ದು, 91.94% ಫಲಿತಾಂಶದೊಂದಿಗೆ 3,46,871 ಬಾಲಕರ ಸಾಧನೆಯೂ ಗಮನಾರ್ಹವಾಗಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಅಂತರವೂ ಈ ಬಾರಿ ಕಡಿಮೆಯಾಗಿದ್ದು, ನಗರ ಪ್ರದೇಶದ 3,05,533 ವಿದ್ಯಾರ್ಥಿಗಳು (93.2%) ಹಾಗೂ ಗ್ರಾಮೀಣ ಭಾಗದ 4,19,261 ವಿದ್ಯಾರ್ಥಿಗಳು (94.80%) ಉತ್ತೀರ್ಣರಾಗಿದ್ದಾರೆ. ಗ್ರೇಡ್‌ವಾರು ವಿಶ್ಲೇಷಣೆಯಲ್ಲಿ 68,207 ವಿದ್ಯಾರ್ಥಿಗಳು A+ ಹಾಗೂ 1,30,403 ಮಂದಿ A ಗ್ರೇಡ್ ಪಡೆದಿದ್ದಾರೆ. ಇದೇ ವೇಳೆ 1,40,963 ವಿದ್ಯಾರ್ಥಿಗಳು B+ ಮತ್ತು 1,42,645 ಮಂದಿ B ಗ್ರೇಡ್ ಗಳಿಸಿದ್ದು, 1,28,722 ಹಾಗೂ 1,13,854 ವಿದ್ಯಾರ್ಥಿಗಳು C ಗ್ರೇಡ್ ಪಡೆದು ಪಾಸ್ ಆಗಿದ್ದಾರೆ. ಈ ಅಂಕಿಅಂಶಗಳು ರಾಜ್ಯದ ಶಿಕ್ಷಣ ಗುಣಮಟ್ಟದಲ್ಲಿ ಗಣನೀಯ ಏರಿಕೆಯನ್ನು ತೋರಿಸುತ್ತಿದ್ದು, ಸಮಗ್ರವಾಗಿ ವಿದ್ಯಾರ್ಥಿಗಳ ಸಾಧನೆಗೆ ಸ್ಪಷ್ಟ ಸಾಕ್ಷಿಯಾಗಿದೆ.