ಹೈಲೈಟ್ಸ್:
- ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗಳಿಗೆ ಗ್ರೇಡ್ ವ್ಯವಸ್ಥೆ ಕುರಿತು ಹೈಕೋರ್ಟ್‌ನಲ್ಲಿ ಪ್ರಶ್ನೆ
- ಮಾಧ್ಯಮ ವರದಿಗಳ ಆಧಾರದಲ್ಲಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು
- ಅಧಿಕೃತ ದಾಖಲೆಗಳಿಲ್ಲದೆ ಅರ್ಜಿ; ಪ್ರಚಾರ ಉದ್ದೇಶ ಎಂದು ಕೋರ್ಟ್ ದಂಡ ವಿಧನೆ
ಈ ಪ್ರಕರಣವನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ, ಅರ್ಜಿದಾರರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಮಾಧ್ಯಮ ವರದಿಗಳನ್ನು ಆಧರಿಸಿ ಬೆಂಗಳೂರಿನ ಎಚ್.ಎನ್. ಚಂದನಾ ಮತ್ತು ಎಸ್. ವೆಂಕಟೇಶ್ ಸಲ್ಲಿಸಿದ್ದ ಅರ್ಜಿಯಲ್ಲಿ ಸರ್ಕಾರದ ಯಾವುದೇ ಅಧಿಕೃತ ಆದೇಶದ ದಾಖಲೆಗಳನ್ನು ಸಲ್ಲಿಸಲಾಗಿಲ್ಲ ಎಂದು ನ್ಯಾಯಪೀಠ ಸೂಚಿಸಿದೆ.
‘ಪತ್ರಿಕಾ ವರದಿಗಳ ಆಧಾರದ ಮೇಲೆ ಮಾತ್ರ ಇಂತಹ ವಿಷಯಗಳನ್ನು ಪ್ರಶ್ನಿಸುವುದು ಸೂಕ್ತವಲ್ಲ. ಸರ್ಕಾರದ ನಿರ್ಧಾರವನ್ನು ರದ್ದುಪಡಿಸಲು ನ್ಯಾಯಾಲಯದ ವಿಶೇಷ ಅಧಿಕಾರವನ್ನು ಬಳಸಬೇಕಾದ ಪರಿಸ್ಥಿತಿ ಇಲ್ಲಿ ಇಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.
ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿ
ಇದೇ ವೇಳೆ, ಈ ಅರ್ಜಿ ಪ್ರಚಾರಕ್ಕಾಗಿ ಸಲ್ಲಿಸಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ ನ್ಯಾಯಪೀಠ, ಅರ್ಜಿದಾರರಿಗೆ ತಲಾ 50 ಸಾವಿರ ರೂ.ಗಳಂತೆ ಒಟ್ಟು 1 ಲಕ್ಷ ರೂ. ದಂಡ ವಿಧಿಸಿತು. ಈ ಮೊತ್ತವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕೆಂದು ಸೂಚಿಸಿದೆ.
ದಂಡವನ್ನು ಪಾವತಿಸದಿದ್ದಲ್ಲಿ ಭೂ ಕಂದಾಯ ಬಾಕಿಯಂತೆ ವಸೂಲಿ ಮಾಡುವುದಾಗಿ ಕೂಡ ಎಚ್ಚರಿಕೆ ನೀಡಲಾಗಿದೆ.
ದಂಡ ಮೊತ್ತ ಹೆಚ್ಚಿಸಿದ ಹೈಕೋರ್ಟ್
ವಿಚಾರಣೆ ವೇಳೆ ಅರ್ಜಿದಾರರು ಮತ್ತೆ ವಾದ ಮುಂದುವರಿಸಿ, ಹಿಂದಿ ಭಾಷೆಯನ್ನು ತೆಗೆದುಹಾಕಲಾಗುತ್ತಿದೆ ಎಂಬ ಅಂಶವನ್ನು ಮುಂದಿಟ್ಟರು. ಇದರಿಂದ ಅಸಮಾಧಾನಗೊಂಡ ನ್ಯಾಯಪೀಠ, ಅರ್ಜಿಯಲ್ಲಿ ತಪ್ಪು ಮಾಹಿತಿಯನ್ನು ಸೇರಿಸಿರುವುದಾಗಿ ಸೂಚಿಸಿತು.
ಪತ್ರಿಕಾ ವರದಿಗಳಲ್ಲಿಲ್ಲದ ವಿಷಯಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, ದಂಡದ ಮೊತ್ತವನ್ನು 1 ಲಕ್ಷ ರೂ.ಗಳಿಗೆ ಹೆಚ್ಚಿಸಿ ಅರ್ಜಿಯನ್ನು ವಜಾಗೊಳಿಸಿತು.