ಶಿವಮೊಗ್ಗ: ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸದ ಕುಲಪತಿಗಳ ವಿರುದ್ಧ ಎನ್‌ಎಸ್‌ಯುಐ ನೇತೃತ್ವದಲ್ಲಿ ನಡೆದ ಪ್ರತಿಭಟನೆ ತೀವ್ರಗೊಂಡಿದ್ದು, ಕುಲಪತಿ ಕಚೇರಿ ಆವರಣದಲ್ಲಿ ವಿದ್ಯಾರ್ಥಿಗಳು ಕುರ್ಚಿ ಸೇರಿದಂತೆ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ವಿದ್ಯಾರ್ಥಿಗಳು ವಿಸಿಗೆ ಧಿಕ್ಕಾರ ಕೂಗಿ ಕಚೇರಿ ಬೋರ್ಡ್‌ಗೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 5 ತಿಂಗಳ ಹಿಂದೆ ನಡೆದ ಪರೀಕ್ಷೆಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ, 1, 3 ಮತ್ತು 5ನೇ ಸೆಮಿಸ್ಟರ್ ಫಲಿತಾಂಶಗಳು ಬಾಕಿಯೇ ಉಳಿದಿವೆ ಎಂದು ಆರೋಪಿಸಿದ್ದಾರೆ. ಕಳೆದ 3 ವರ್ಷಗಳಿಂದ ಅಂಕಪಟ್ಟಿ ವಿತರಣೆ ಆಗಿಲ್ಲ, ಪಾಸಿಂಗ್ ಸರ್ಟಿಫಿಕೇಟ್ ಹಾಗೂ ಪದವಿ ಪ್ರಮಾಣ ಪತ್ರ ನೀಡಲಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ಮೌಲ್ಯಮಾಪನವನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ. ಕುಲಪತಿ ಮತ್ತು ರಿಜಿಸ್ಟ್ರಾರ್ ಅವರನ್ನು ವಾಪಸ್ ಕರೆಸಿಕೊಳ್ಳಬೇಕು, ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.