ಇನ್ಮೇಲೆ ಪೋಷಕರ ಸ್ಮಾರ್ಟ್‌ಫೋನ್‌ಗೆ ಹೋಲಿಸ್ಟಿಕ್ ರಿಪೋರ್ಟ್ ಕಾರ್ಡ್ ನೀಡಲು ಶಿಕ್ಷಣ ಇಲಾಖೆ ಸಜ್ಜಾಗಿದೆ
ಎಲ್‌ಕೆಜಿ ರಿಂದ ಪಿಯುಸಿ ತನಕ ಕಾಗದದ ಅಂಕಪಟ್ಟಿಗೆ ಬದಲಾಗಿ ಡಿಜಿಟಲ್ ಪ್ರೋಗ್ರೆಸ್ ಕಾರ್ಡ್ ಜಾರಿ ಯೋಜನೆ
ಮಕ್ಕಳ ಶೈಕ್ಷಣಿಕ ಪ್ರಗತಿ ಇನ್ನು ಪೋಷಕರ ಬೆರಳ ತುದಿಯಲ್ಲೇ ಲಭ್ಯವಾಗಲಿದೆ
ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಅಂಕಪಟ್ಟಿಗಳನ್ನು ಡಿಜಿಲಾಕರ್‌ನಲ್ಲಿ ಲಭ್ಯವಾಗುವಂತೆ ಯಶಸ್ವಿಯಾಗಿ ಜಾರಿಗೆ ತಂದ ಶಿಕ್ಷಣ ಇಲಾಖೆ ಇದೀಗ ಮತ್ತೊಂದು ಹೊಸ ಹೆಜ್ಜೆ ಇಡಲು ಮುಂದಾಗಿದೆ. ಎಲ್‌ಕೆಜಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಡಿಜಿಟಲ್ ರೂಪದಲ್ಲಿ ನೀಡುವ ಯೋಜನೆ ರೂಪಿಸಲಾಗುತ್ತಿದೆ.
ಇದುವರೆಗೆ ಪೋಷಕರು ಅಂಕಪಟ್ಟಿಗಳ ಮೂಲಕ ಮಕ್ಕಳ ಪರೀಕ್ಷಾ ಫಲಿತಾಂಶಗಳನ್ನು ತಿಳಿದುಕೊಳ್ಳುತ್ತಿದ್ದರು. ಈಗ ‘ಹೋಲಿಸ್ಟಿಕ್ ರಿಪೋರ್ಟ್ ಕಾರ್ಡ್’ ಪರಿಕಲ್ಪನೆಯಡಿ ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಯನ್ನು ಒಳಗೊಂಡ ಡಿಜಿಟಲ್ ವರದಿ ಮೊಬೈಲ್ ಮತ್ತು ಇ-ಮೇಲ್‌ಗೆ ಕಳುಹಿಸುವ ವ್ಯವಸ್ಥೆ ತರಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿ–2020 ಹಾಗೂ ಎನ್‌ಸಿಇಆರ್‌ಟಿ ಪರಾಖ್ ಉಪಕ್ರಮದಡಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ಯೋಜಿಸಲಾಗಿದೆ. ಪರೀಕ್ಷಾ ಅಂಕಗಳು, ಶಿಕ್ಷಕರ ಅಭಿಪ್ರಾಯಗಳು ಹಾಗೂ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಯ ವಿವರಗಳು ಪೋಷಕರ ನೋಂದಾಯಿತ ಮೊಬೈಲ್ ಅಥವಾ ಇ-ಮೇಲ್‌ಗೆ ತಲುಪಲಿವೆ.
ಈ ಡಿಜಿಟಲ್ ವ್ಯವಸ್ಥೆಯಿಂದ ಪೋಷಕರು ತಮ್ಮ ಮಕ್ಕಳ ಪ್ರಗತಿಯನ್ನು ಯಾವುದೇ ಸ್ಥಳದಿಂದಲೇ ಸುಲಭವಾಗಿ ಗಮನಿಸಬಹುದು. ಕಾಗದರಹಿತ ವ್ಯವಸ್ಥೆಯಿಂದ ದಾಖಲೆ ಸಂಗ್ರಹವೂ ಸುಲಭವಾಗಲಿದೆ.
ಡಿಜಿಟಲ್ ಅಂಕಪಟ್ಟಿಯ ಜೊತೆಗೆ ಭೌತಿಕ ಅಂಕಪಟ್ಟಿಯನ್ನೂ ವಿತರಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.