ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನ ಏರಿಕೆ ಮತ್ತು ಹೀಟ್‌ವೇವ್ ತೀವ್ರತೆಯಿಂದ ದೆಹಲಿ ಶಾಲೆಗಳಲ್ಲಿ ಪ್ರತಿ ಗಂಟೆಗೆ ನೀರಿನ ವಿರಾಮ ನೀಡುವ ಜೊತೆಗೆ ಹೊರಾಂಗಣ ಪ್ರಾರ್ಥನೆಗಳನ್ನು ರದ್ದುಗೊಳಿಸಲಾಗಿದೆ. ವಿದ್ಯಾರ್ಥಿಗಳು ಬಿಸಿಲಿಗೆ ಅತಿಯಾಗಿ ಒಳಗಾಗದಂತೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಹೊರಡಿಸಿದ್ದು, ಪ್ರಾರ್ಥನೆಯನ್ನು ನೆರಳಿನಲ್ಲಿ ಅಥವಾ ಒಳಾಂಗಣದಲ್ಲಿ ನಡೆಸಲು ಸೂಚಿಸಿದೆ. ತರಗತಿಗಳ ನಡುವೆ ಮಕ್ಕಳು ನೀರು ಕುಡಿಯುವುದನ್ನು ಮರೆತಬಾರದು ಎಂಬ ಕಾರಣಕ್ಕೆ 45 ರಿಂದ 60 ನಿಮಿಷಗಳಿಗೊಮ್ಮೆ ‘ವಾಟರ್ ಬೆಲ್’ ಬಾರಿಸಲು ಸೂಚಿಸಲಾಗಿದೆ. ಶಾಖ ಸಂಬಂಧಿತ ಆರೋಗ್ಯ ಸಮಸ್ಯೆಗಳು ಮತ್ತು ನಿರ್ಜಲೀಕರಣದ ಅಪಾಯವನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಮಯ ಹೊರಾಂಗಣದಲ್ಲಿ ಇರುವುದನ್ನು ತಪ್ಪಿಸಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಹೀಟ್‌ವೇವ್ ಬಗ್ಗೆ ಜಾಗೃತಿ ಮೂಡಿಸುವುದು, ಅಗತ್ಯವಿದ್ದಾಗ ತಕ್ಷಣ ವೈದ್ಯಕೀಯ ನೆರವು ಒದಗಿಸುವುದು ಮುಖ್ಯ ಎಂದು ತಿಳಿಸಲಾಗಿದೆ. ಪೋಷಕರೂ ತಮ್ಮ ಮಕ್ಕಳನ್ನು ಹಗುರವಾದ, ಹತ್ತಿ ಬಟ್ಟೆಗಳಲ್ಲಿ ಶಾಲೆಗೆ ಕಳುಹಿಸಲು ಸೂಚಿಸಲಾಗಿದೆ.