ಜೈಪುರ: ಆರ್‌ಸಿಬಿ (RCB) ತಂಡದಿಂದ ಹೊರಬಿದ್ದಿರುವ ವಿಚಾರ ನನ್ನ ವೈಯಕ್ತಿಕ ನಿರ್ಧಾರವಲ್ಲ. ನನ್ನನ್ನು ಕೈಬಿಟ್ಟ ಹಿಂದಿನ ಕಾರಣವನ್ನೂ ಫ್ರಾಂಚೈಸಿ ತಿಳಿಸಿಲ್ಲ ಎಂದು ಪೋಕ್ಸೋ ಪ್ರಕರಣದ ಆರೋಪಿ ಹಾಗೂ ಆರ್‌ಸಿಬಿ ವೇಗಿ ಯಶ್ ದಯಾಳ್ (Yash Dayal) ಹೇಳಿದ್ದಾರೆ. 2025ರ ಐಪಿಎಲ್ (IPL 2025) ಆವೃತ್ತಿಯಲ್ಲಿ ಆರ್‌ಸಿಬಿ ಪರ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಯಾಳ್, ಇದೀಗ ಮೊದಲ ಬಾರಿಗೆ ತಮ್ಮ ಹೊರಗಡೆಯಾದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್, ವೈಯಕ್ತಿಕ ಕಾರಣಗಳಿಂದ ದಯಾಳ್ ಈ ಸೀಸನ್‌ನಲ್ಲಿ ತಂಡದ ಭಾಗವಾಗುವುದಿಲ್ಲ ಎಂದಿದ್ದರು. ಆದರೆ ದಯಾಳ್ ಹೇಳಿಕೆ ಅದಕ್ಕೆ ವಿರುದ್ಧವಾಗಿದೆ. ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ದಯಾಳ್, “ಆರ್‌ಸಿಬಿ ನನ್ನ ತಂಡ. ಅವರು ನನ್ನನ್ನು ಸುಲಭವಾಗಿ ಬಿಡುವುದಿಲ್ಲ ಎಂದು ಭಾವಿಸಿದ್ದೆ. ಈ ಸೀಸನ್‌ನಲ್ಲೂ ರಿಟೇನ್ ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ನನ್ನ ಸ್ಥಾನಕ್ಕೆ ಬೇರೆ ಆಟಗಾರನನ್ನೂ ಆಯ್ಕೆ ಮಾಡಿರಲಿಲ್ಲ. ಆದ್ದರಿಂದ ನಾನು ತಂಡದ ಮುಖ್ಯ ಭಾಗ ಎಂದುಕೊಂಡಿದ್ದೆ. ಆದರೆ ಈ ಸೀಸನ್‌ನಿಂದ ದೂರ ಉಳಿಯುವ ನಿರ್ಧಾರ ನನ್ನದೇ ಅಲ್ಲ. ಅಂತಿಮ ನಿರ್ಧಾರ ಯಾವಾಗಲೂ ಆಡಳಿತ ಮಂಡಳಿಯದ್ದೇ. ನನ್ನನ್ನು ಕೈಬಿಟ್ಟ ನಿಖರ ಕಾರಣ ಇನ್ನೂ ತಿಳಿದಿಲ್ಲ. ನಾನು ಆರ್‌ಸಿಬಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ” ಎಂದಿದ್ದಾರೆ. ಇದೇ ವೇಳೆ, ತಂಡದ ಆಡಳಿತ ಮಂಡಳಿ, ಕೋಚ್‌ಗಳು ಹಾಗೂ ದಿನೇಶ್ ಕಾರ್ತಿಕ್ ಜೊತೆ ಇನ್ನೂ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ. ದಯಾಳ್ ವಿರುದ್ಧ ಜೈಪುರದ ಸಂಗನೇರ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದ್ದು, ಬಾಲಕಿಯೊಬ್ಬಳ ಮೇಲೆ ಎರಡು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೂ ಮೊದಲು ಗಾಜಿಯಾಬಾದ್‌ನ ಯುವತಿಯೊಬ್ಬಳು ಸಹ ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ದೂರು ದಾಖಲಿಸಿದ್ದಳು.